ಪಪರಮಾತ್ಮನ ಅಗಣಿತ ಕಲ್ಯಾಣಗುಣಗಳಲ್ಲಿ ಕರುಣೆಯೇ ಪ್ರಧಾನವಾದುದ್ದು. ಸಕಲ ಸದ್ಗುಣಗಳೂ ರತ್ನಸದೃಶವಾದವುಗಳೆಂಬುದು ನಿಜವಾದರೂ ಕರುಣೆಯ ಕುಂದಣವಿಲ್ಲದೆ ಅವು ಶೋಭಿಸಲಾರವು. ಪಂಡಿತ-ಪಾಮರ, ಬಡವ-ಬಲ್ಲಿದ, ಪುಣ್ಯಾತ್ಮನ-ಪಾಪಾತ್ಮವೆಂಬ ಯಾವ ಭೇಧವೂ ಇಲ್ಲದೆ ಸರ್ವರಿಗೂ ಸಮಾನವಾಗಿ ಜೀವನಾಧಾರವಾದ ಗಾಳಿ ನೀರು ಬೆಳಕುಗಳು ದೊರೆಯುತ್ತಿರುವುದರ ಹಿನ್ನಲೆಯಲ್ಲಿ ಪರಮಾತ್ಮನ ಕರುಣೆಯನ್ನೇ ಕಾಣಬಹುದು. ಭಗವಂತನು ಮಾನವ ರೂಪ ಧರಿಸಿ, ಮಾನವರ ನಡುವೆಯೇ ಓಡಾಡುತ್ತ ಮಾನವಮಂಗಲವನ್ನು ಸಾಧಿಸುವ ಅವನ ಕಾರ್ಯ ಪ್ರಣಾಳಿಯಲ್ಲೂ ಗೋಚರವಾಗುವುದು ಅದೇ ಕರುಣೆಯೇ. ಶ್ರೀರಾಮಕೃಷ್ಣರ ದೈವತ್ವವೆಂಬುದು ಮಾನವತ್ವದ ಪರದೆಯನ್ನು ಹರಿದು ಕಾಣಿಸಿಕೊಂಡಾಗ ನೆರೆದಿದ್ದ ಭಕ್ತರೆಲ್ಲ ಕಂಡು ಅನುಭವಿಸಿದ್ದು ಅದೇ ಅಲೌಕಿಕ ಪ್ರೇಮ- ಕರುಣೆಗಳನ್ನೇ.
ಅಂದು ೧೮೮೬ರ ಜನವರಿ ೦೧, ಕ್ರೈಸ್ತರಿಗೆ ಹೊಸ ವರ್ಷಾರಂಭದ ದಿನ, ಸರ್ಕಾರಿ ಕಛೇರಿಗಳಿಗೆ ರಜೆಯಿದ್ದರಿಂದ ಮಧ್ಯಾಹ್ನಕ್ಕೆ ರಾಮಕೃಷ್ಣರನ್ನು ನೋಡಲು ಒಬ್ಬೊಬ್ಬರಾಗಿ ಬಂದು ಬಹುಸಂಖ್ಯೆಯಲ್ಲಿ ಸೇರಿದರು. ತರುಣಶಿಷ್ಯರಂತೂ ಇದ್ದೇ ಇರುತ್ತಾರೆ. ಅಂದು ರಾಮಕೃಷ್ಣರು ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಯುತರಾಗಿ ಲವಲವಕಿಯಿಂದಿದ್ದರು. ಬಹುದಿನಗಳ ನಂತರ ಅಂದು ಅವರಿಗೆ ತೋಟದಲ್ಲಿ ಹವಾಸೇವನೆ ಮಾಡುವ ಇಚ್ಛೆಯಾದ್ದರಿಂದ ಒಂದಿಬ್ಬರು ಭಕ್ತರೊಂದಿಗೆ ಕೆಳಗಿಳಿದು ಬಂದರು. ಆ ವೇಳೆ ಕೆಲ ಭಕ್ತರು ಮನೆ ಒಳಗೆ ಇನ್ನೂ ಕೆಲವರು ತೋಟದಲ್ಲಿ ಮರದ ಕೆಳಗೆ ಕುಳಿತು ಮಾತನಾಡುತ್ತಿದ್ದರು. ಅನಿರೀಕ್ಷಿತವಾಗಿ ಶ್ರೀರಾಮಕೃಷ್ಣರನ್ನು ನೋಡಿದ ಭಕ್ತರು ಎದ್ದು ನಿಂತು, ಭಕ್ತಿಯಿಂದ ನಡುಬಾಗಿ ಪ್ರಣಾಮ ಮಾಡಿದರು. ಅಲ್ಲಿಂದ ಅವರು ವಿಶಾಲ ಕೋಣೆಯ ಮೂಲಕ ಹೊರ ಬಂದು ತೋಟದ ಮಾರ್ಗದಲ್ಲಿ ಮುಂದುವರಿದರು. ಭಕ್ತರು ಸಹ ಅವರ ಹಿಂದೆಯೇ ಹೊರಟರು. ಗೇಟಿನ ಕಡೆ ಹೋಗುವ ರಸ್ತೆಯ ಮಧ್ಯಭಾಗಕ್ಕೆ ಬಂದಾಗ ಅಲ್ಲಿ ಗಿರೀಶ, ರಾಮ, ಅತುಲ ಮತ್ತು ಇನ್ನೂ ಕೆಲವರು ಮರದ ಕೆಳಗೆ ಕುಳಿತು ಮಾತನಾಡುತ್ತಿದ್ದರು. ರಾಮಕೃಷ್ಣರನ್ನು ಕಂಡ ಕೂಡಲೇ ಸಂತಸದಿಂದ ಎದ್ದು ನಮಸ್ಕರಿಸಿ ಸನ್ನಿಹಕ್ಕೆ ಬಂದರು. ಅವರೆಲ್ಲ ಮಾತನಾಡುವ ಮೊದಲೇ ಶ್ರೀರಾಮಕೃಷ್ಣರು ಅತ್ಯಂತ ಅನಿರೀಕ್ಷಿತವಾಗಿ ಗಿರೀಶನನ್ನು ಕೇಳಿದರು : “ ಗಿರೀಶ್, ನೀನು ನನ್ನ ಬಗ್ಗೆ ಎಲ್ಲರ ಹತ್ತಿರವೂ ಏನೇನೊ ಹೇಳಿಕೊಂಡು ತಿರುಗಾಡುತ್ತಿದ್ದೀಯಲ್ಲ, ನೀನು ನನ್ನಲ್ಲಿ ಅಂಥದ್ದನ್ನು ಏನು ಕಂಡೆ ನೀನು?” ಸ್ವಲ್ಪ ಹೇಳು ನೋಡೋಣ?’’ ಎಂಥ ನೇರವಾದ ಪ್ರಶ್ನೆ! ಮಹಿಮೆಯನ್ನು ಎಷ್ಟೇ ಅರಿತವರಾದರೂ ಹೀಗೆ ಇದ್ದಕ್ಕಿದಂತೆ ಕೇಳಿದಾಗ ಬೆಚ್ಚಿ ಅವಾಕ್ಕಾಗಿ ನಿಂತುಬಿಡುತ್ತಾರೆ. ಆದರೆ ಶ್ರದ್ಧೆಯ ಮೂರ್ತರೂಪವೇ ಆಗಿದ್ದ ಗಿರೀಶನು ಇದ್ದರಿಂದ ಸ್ವಲ್ಪವೂ ವಿಚಲಿತನಾಗದೆ ಅವರ ಪದತಲದಲ್ಲಿ ಮಂಡಿಯೂರಿ ಕುಳಿತು ತಲೆಯತ್ತಿ ಕೈ ಜೋಡಿಸಿ ಭಾವಭರಿತನಾಗಿ ಗದ್ಗದ ಸ್ವರದಿಂದ ಹೇಳತೊಡಗಿದನು. “ವ್ಯಾಸ ವಾಲ್ಮೀಕಿಯರೂ ಯಾರ ವೈಭವವನ್ನೂ ಅಳೆಯಲಾಗದೆ ಹೋದರೊ ಅಂತವರ ಬಗ್ಗೆ ನಾನೇನು ಹೇಳಲು ಸಾಧ್ಯ?’’ ಗಿರೀಶನ ಅಂತರಿಕ ಸರಳ ವಿಶ್ವಾಸವು ಅವನು ಉಚ್ಚರಿಸುತ್ತಿದ್ದ ಪ್ರತಿಯೊಂದು ಅಕ್ಷರದಲ್ಲಿಯೂ ಹೊರ ಹೊಮ್ಮುತ್ತಿದ್ದನ್ನು ಕೇಳಿ ಶ್ರೀರಾಮಕೃಷ್ಣರು ಮುಗ್ಧರಾದರು. ನೆರೆದಿದ್ದ ಎಲ್ಲಾ ಭಕ್ತರನ್ನುದ್ದೇಶಿಸಿ, ಮಂದಸ್ಮಿತರಾಗಿ, “ನಿಮಗೆ ನಾನಿನ್ನೇನು ತಾನೆ ಹೇಳಲಿ? ನಿಮಗೆಲ್ಲ ಆಧ್ಯಾತ್ಮಿಕ ಜಾಗೃತಿಯುಂಟಾಗಲಿ!” ಎಂದುದ್ಗರಿಸಿದರು. ಹೀಗೆಂದವರೇ ಭಕ್ತರ ಮೇಲಿನ ವಾತ್ಸಲ್ಯ-ಕರುಣೆಗಳಿಂದ ಮೈಮರೆತು ಭಾವಾವಿಷ್ಟರಾಗಿ ನಿಂತರು. ಲೇಶ ಮಾತ್ರ ಸ್ವಾರ್ಥವಿಲ್ಲದೆ ಆ ಗಂಭೀರ ಆಶೀರ್ವಾಣಿಯು ಎಲ್ಲರ ಅಂತರವನ್ನು ತಾಕಿ ಅವರಲ್ಲಿ ದೊಡ್ಡ ಆನಂದದ ಅಲೆಗಳನ್ನು ಎಬ್ಬಿಸಿತ್ತು. ಭಕ್ತರು ದೇಶ ಕಾಲಗಳನ್ನು ಮರೆತರು, ಶ್ರೀರಾಮಕೃಷ್ಣರ ಕಾಯಿಲೆಯನ್ನು ಮರೆತರು ಮತ್ತು ಅವರಿಗೆ ವಾಸಿಯಾಗುವವರೆಗೂ ಅವರನ್ನು ಸ್ಪರ್ಶಿಸಕೂಡದೆಂಬ ತಮ್ಮ ಹಿಂದಿನ ನಿರ್ಧಾರವನ್ನು ಮರೆತರು. ಒಬ್ಬ ಅಪೂರ್ವ ದಿವ್ಯ ವ್ಯಕ್ತಿಯು ಪ್ರೀತಿ ಸಹಾನುಭೂತಿಯಿಂದ ಕೂಡಿದವನಾಗಿ ತಮ್ಮ ಮುಂದೆ ನಿಂತಿರುವುದೊಂದೇ ಅವರ ಗಮನ. ತಮ್ಮ ಕಷ್ಟವನ್ನು ನೀಗಿಸುವುದಕ್ಕಾಗಿ ಅಪಾರ ಕರುಣೆಯಿಂದ ತಾಯಿಯು ತನ್ನ ಮಕ್ಕಳನ್ನು ಮಡಿಲಿನಲ್ಲಿ ಎತ್ತಿಕೊಳ್ಳುವಂತೆ ತಮ್ಮನ್ನು ರಕ್ಷಿಸಲು ಬಂದಿರುವರು, ಎಂಬುದೊಂದೇ ವಿಚಾರ ಅವರ ಮನಸ್ಸಿನಲ್ಲಿತ್ತು. ಅವರೆಲ್ಲರೂ ಅವರ ಪಾದಕ್ಕೆ ಎರಗಿ ಅವರ ಪಾದಧೂಳಿಯನ್ನು ಸ್ವೀಕರಿಸುತ್ತ “ಜೈರಾಮಕೃಷ್ಣ’ ಎಂದು ಘೋಷಿಸತೊಡಗಿದರು. ಶ್ರೀರಾಮಕೃಷ್ಣರು ಅಲ್ಲಿ ನೆರೆದ ಪ್ರತಿಯೊಬ್ಬ ಭಕ್ತರನ್ನೂ ದಿವ್ಯಭಾವದಲ್ಲಿ ಸ್ಪರ್ಶಿಸತೊಡಗಿದರು. ಭಕ್ತರ ಆನಂದಕ್ಕೆ ಪಾರವೇ ಇರಲಿಲ್ಲ, ಶ್ರೀರಾಮಕೃಷ್ಣರು ತಮ್ಮ ದೇವತ್ವವನ್ನು ಇನ್ನು ಯಾರಿಂದಲೂ ಮರೆ ಮಾಚುವುದಿಲ್ಲ ಎಂದು ಭಕ್ತರು ಭಾವಿಸಿದರು. ಅವರಿಗೆ ತಮ್ಮ ದೋಷಗಳ ಮತ್ತು ದೌರ್ಬಲ್ಯಗಳ ಅರಿವಿತ್ತು ಪಾಪಿಗಳೂ, ತಾಪಿಗಳೂ ಎಲ್ಲರೂ ಅವರ ಚರಣಾಶ್ರಯವನ್ನು ಪಡೆದು ಅಭಯ ದಾನವನ್ನು ಹೊಂದುತ್ತಾರೆ ಎಂಬುದರಲ್ಲಿ ಭಕ್ತರಿಗೆ ಸ್ವಲ್ಪವೂ ಸಂದೇಹವಿರಲಿಲ್ಲ. ಕೆಲವರು ಈ ಘಟನೆಯಿಂದ ದಿಗ್ಬ್ರಮೆಗೊಂಡು ಮಂತ್ರಮುಗ್ಧರಾಗಿ ಶ್ರೀರಾಮಕೃಷ್ಣರನ್ನೇ ದಿಟ್ಟಿಸಿ ನೋಡುತ್ತ ನಿಂತು ಬಿಟ್ಟರು. ಮತ್ತೆ ಕೆಲವರು ಮನೆಯಲ್ಲಿದ್ದವರನ್ನೆಲ್ಲ ಗಟ್ಟಿಯಾಗಿ ಕೂಗಿ ಕರೆದು ಶ್ರೀರಾಮಕೃಷ್ಣರ ಆಶೀರ್ವಾದ ಪಡೆಯಿರೆಂದು ಹೇಳಿದರು. ಇನ್ನು ಕೆಲವರು ಹೂವುಗಳನ್ನು ತಂದು ಮಂತ್ರಪೂರ್ವಕವಾಗಿ ಶ್ರೀರಾಮಕೃಷ್ಣರನ್ನು ಪೂಜಿಸತೊಡಗಿದರು. ಸ್ವಲ್ಪಹೊತ್ತಿನಲ್ಲಿಯೇ ಶ್ರೀರಾಮಕೃಷ್ಣರ ಸಮಾಧಿಯು ಸಮಾಪ್ತಿಗೊಂಡಿತು ಮತ್ತು ಭಕ್ತರೂ ಕೂಡ ಸಾಮಾನ್ಯ ಸ್ಥಿತಿಗೆ ಬಂದರು. ಅಲ್ಲಿಗೆ ತಮ್ಮ ಓಡಾಟವನ್ನು ನಿಲ್ಲಿಸಿ ಶ್ರೀರಾಮಕೃಷ್ಣರು ತಮ್ಮ ಕೊಠಡಿಗೆ ಹೋಗಿ ಕುಳಿತುಕೊಂಡರು. ಅಂದಿನ ಅದ್ಭುತ ಪ್ರಸಂಗದಲ್ಲಿ ಭಾಗಿಗಳಾಗಿದ್ದ ಭಕ್ತರಲ್ಲನೇಕರು ಸಾಮಾನ್ಯಸ್ಥಿತಿಗೆ ಮರಳಿದ ಮೇಲೆ, ಶ್ರೀರಾಮಕೃಷ್ಣರ ಆ ಅಪೂರ್ವ ಭಾವದ ಕುರಿತಾಗಿ ವಿಚಾರ ಮಾಡಿದರು. ಅವರು ಆಗ ಉಕ್ಕಿ ಹರಿವ ಕರುಣಾಸಾಗರರಾದುದನ್ನು, ಭಕ್ತರ ಅರ್ಹತೆಗೂ ಮೀರಿ ಕೃಪೆ ಮಾಡಿದ್ದನ್ನು ಕಂಡಾಗ, ಆ ಮುಹೂರ್ತದಲ್ಲಿ ಅವರೊಂದು ಕಲ್ಪವೃಕ್ಷವೇ ಆಗಿಬಿಟ್ಟಿದ್ದರು ಎನ್ನಲಡ್ಡಿಯಿಲ್ಲ! ರಾಮಚಂದ್ರ ದತ್ತನೇ ಮೊದಲಾದ ಭಾವುಕ ಭಕ್ತಿಯಿಂದ ಈ ಭಾವನೆ ಬಹುಬೇಗ ಪ್ರಚಾರವಾಗಿ ಭಕ್ತಸಮೂಹದಲ್ಲಿ ಸ್ಥಿರವಾಗಿ ನಿಂತುಬಿಟ್ಟಿತು. ಜನವರಿ ಒಂದನೇ ದಿನವೆಂಬುದು ‘ಕಲ್ಪತರು ದಿನ’ವೆಂದೇ ಪ್ರಸಿದ್ಧವಾಯಿತು.
ಸ್ವಾಮಿ ಶಾರದಾನಂದರೆನ್ನುತ್ತಾರೆ: “ಕಲ್ಪವೃಕ್ಷದ ಗುಣವೇನೆಂದರೆ ಯಾರು ಏನನ್ನೇ ಬೇಡಲಿ, ಅದನ್ನು ಅವನಿಗೆ ಕೊಡುವುದು. ಅದರಿಂದ ಅವನಿಗೆ ಹಿತವಾಗಬಹುದೆ, ಶ್ರೇಯಸ್ಸಾಗಬಹುದೆ ಎನ್ನುವುದನ್ನು ಅದು ವಿವೇಚಿಸ ಹೋಗುವುದಿಲ್ಲ. ಆದ್ದರಿಂದ ಒಬ್ಬನು ಕಲ್ಪವೃಕ್ಷದಿಂದ ತನಗೆ ಬೇಕೆನಿಸಿದ್ದನ್ನು ಪಡೆದುಕೊಂಡರೂ ಕೊನೆಗೆ ಆದರಿಂದ ಅವನಿಗೆ ಕೆಡುಕೇ ಆಗಬಹುದು. ಆದರೆ ಆ ದಿನ ಶ್ರೀರಾಮಕೃಷ್ಣರು ಹಾಗೆ ಮಾಡದೆ, ಅಲೌಕಿಕ ಸುಖಪ್ರಾಪ್ತಿಯ ದಾರಿಯನ್ನೇ ಸುಗಮಗೊಳಿಸಿದರು. ನಿಜಕ್ಕೂ, ಅವರು ಅಂದು ತಮ್ಮ ದೈವತ್ವವನ್ನು, ಅಥವಾ ದೇವಮಾನವತ್ವವನ್ನು ಬಹಿರಂಗಪಡಿಸಿದರು. ತನ್ಮೂಲಕ, ತಮ್ಮಲ್ಲಿ ಶರಣಾಗಿ ಬಂದ ಸರ್ವರಿಗೂ ಪಕ್ಷಪಾತವಿಲ್ಲದೆ ಅಭಯವನ್ನೂ ಆಶ್ರಯವನ್ನೂ ನೀಡಿದರು. ಶ್ರೀರಾಮಕೃಷ್ಣರು ತಮ್ಮ ದಿವ್ಯತೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ ಮತ್ತು ಭೇದಭಾವವಿಲ್ಲದೆ ಎಲ್ಲರ ಮೇಲೂ ವಿಶೇಷ ಕೃಪೆಯನ್ನು ವರ್ಷಿಸಿದ ದಿನ ಇಂದು. ಶ್ರದ್ಧೆಯಿಂದ ನಮಸ್ಕರಿಸಿ, ರಾಮಕೃಷ್ಣರ ನಿರಂತರ ಕೃಪೆಗಾಗಿ ಪ್ರಾರ್ಥಿಸೋಣ.