ಕೆಲ ಮತಾಂಧರು ಕೇವಲ ಹುಟ್ಟಿನಿಂದ ಬ್ರಾಹ್ಮಣರಾದವರಿಗೆ ಮಾತ್ರ ಆತ್ಮಜ್ಞಾನ ಲಭ್ಯವೆಂದು ಹೇಳುತ್ತಾರೆ. ಇಂತಹ ಅಪಾರ್ಥಗಳಿಂದಲೇ ಹಿಂದೂ ಧರ್ಮಕ್ಕೆ ಅಪಾರ ಅಪಚಾರಗೊಳ್ಳುತ್ತಿರುವುದು. ಜ್ಞಾನನಿಷ್ಠೆ, ಬ್ರಹ್ಮಭಾವ, ಮನಸ್ಸು, ಹೃದಯಗಳ ಶ್ರೀಮಂತಿಕೆ ಗುಣಗಳನ್ನು ಹೊಂದಿರುವ ಸರ್ವರೂ ವಿಪ್ರತರೆ. ತೃಪ್ತಿ, ಆತ್ಮಸಮರ್ಪಣಭಾವ ಮತ್ತು ಸಮೃಕ್ ಜ್ಞಾನದಿಂದ ಬರುವ ಸಮತೋಲನ ಸುಸಂಸ್ಕೃತ ಮನುಷ್ಯನ ಸಾತ್ತ್ವಿಕ ಕುರುಹುಗಳು. ಆಧ್ಯಾತ್ಮಿಕ ಪ್ರಗತಿಯ ದೃಷ್ಠಿಯಲ್ಲಿ ಮಾನವನ ಕುಲವನ್ನು ಮೂರು ಪಂಗಡಗಳಲ್ಲಿ ಕಾಣಬಹುದು. ಪ್ರಾಣಿ-ಮಾನವ, ಮನುಷ್ಯ-ಮಾನವ ಮತ್ತು ದೇವ-ಮಾನವ. ತನ್ನ ಪಾಕೃತಿಕ ಸ್ವಭಾವಗಳಿಗೆ ಅಡಿಯಾಳಾಗಿ ಭಾವಾವೇಶಗಳ ಗುಲಾಮನಂತೆ ವರ್ತಿಸುವವನು ಪ್ರಾಣಿ-ಮಾನವ. ತನ್ನ ಸಹಜ ಪ್ರವೃತ್ತಿಗಳನ್ನು ತಿದ್ದಿ ಸಂಸ್ಕೃತಗೊಳಿಸಿಕೊಂಡು, ಮನಸ್ಸು ಬುದ್ಧಿಗಳನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡಿರುವವನು ಮನುಷ್ಯ-ಮಾನವ, ಇವರು ವಿಪ್ರನೆನಿಸಿಕೊಳ್ಳುವರು. ಇನ್ನೂ ಪೂರ್ಣ ವಿಕಾಸದೆಡೆಗೆ ಮುಂದುವರಿಯುತ್ತಾ ಮಾನವ ಜನ್ಮದ ಸಾರ್ಥಕತೆಗಾಗಿ ಸಾಧನೆ ಮಾಡಿ ದೈವತ್ವದ ಮಟ್ಟವನ್ನು ತಲುಪುವವರೇ ದೇವ-ಮಾನವ.

ಮಾನವ ಜನ್ಮವೇ ಅಪರೂಪವಾದದ್ದು, ಇನ್ನೂ ಉತ್ತಮ ಜೀವವನ್ನು ನಡೆಸಲು ಬೇಕಾದ ಗುಣ ವಿಶೇಷತೆಗಳನ್ನು ಪಡೆದಿರುವುದು ಇನ್ನೂ ಅಪರೂಪ. ಭಗವಂತನ ಅನುಗ್ರಹದಿಂದ ಪ್ರಾಪ್ತಿಯಾಗಿರುವ ಮನುಷ್ಯಜನ್ಮವನ್ನು ವ್ಯರ್ಥ ಕಾರ್ಯಕಲಾಪದಲ್ಲಿ ತೊಡಗಿಸದೆ ಬಾಳನ್ನು ಸಾರ್ಥಕಪಡಿಸಿಕೊಳ್ಳುವ ಆಕಾಂಕ್ಷೆ ಹೊಂದಿ, ಲೌಕಿಕ ವ್ಯವಹಾರದಲ್ಲೇ ಮುಳುಗಿ ಬಾಳನ್ನು ವ್ಯರ್ಥಗೊಳಿಸದೆ ಜೀವನದ ಪರಮಗುರಿಯಾದ ಮೋಕ್ಷಸಾಧನೆಗೆ ಇಚ್ಛಿಸುವವರಂತೂ ಅತೀ ವಿರಳ. ನಮ್ಮೊಳಗೆ ಕಾಡುತ್ತಿರುವ ಅಪೂರ್ಣತೆಯನ್ನೂ, ಸಂಕುಚಿತ ಶಕ್ತಿಯನ್ನೂ ನೀಗಿಸಿ ಶಾಶ್ವತ ಆನಂದವನ್ನು ದೊರಕುವಂತೆ ಮಾಡಲು ಶ್ರೇಷ್ಠ ಗುರುವಿನಿಂದ ಮಾತ್ರ ಸಾಧ್ಯ. ಪರಮಾತ್ಮನ ಅನುಗ್ರಹವಿಲ್ಲದೇ ಮಹಾತ್ಮರ ಸಂಗಭಾಗ್ಯವು ದೊರೆಯದು.

ಸರ್ವರಿಗೂ ತನ್ನ ಜೀವನದ ಪರಮ ಗುರಿಯನ್ನು ಸಾಧಿಸುವ ಅವಕಾಶ ಮತ್ತು ಸಾಮರ್ಥ್ಯ ಇರುತ್ತದೆ. ಯಾವುದೇ ಭೇದಭಾವವಿಲ್ಲದೇ ಸಾಧನೆಯನ್ನು ಮಾಡಬಹುದು. ಸಾಧನೆ ಮಾಡಲು ಬೇಕಿರುವ ಕಠೋರ ನಿಷ್ಠೆ, ದೃಢ ಮನಸ್ಸು, ವೈರಾಗ್ಯಭಾವ, ಅಚಲಶ್ರದ್ಧೆ, ಏಕಾಗ್ರಬುದ್ಧಿ ಲಕ್ಷಣಗಳನ್ನೊಂದಿರಬೇಕು. ಶ್ರವಣ, ಮನನ, ಅಧ್ಯಯನ, ಧ್ಯಾನ ಒಂದು ರೀತಿಯ ಉಗ್ರತಪಸ್ಸು. ಇದಕ್ಕೆ ಬೇಕಾದ ದೃಢಮನಸ್ಸು ಯಾರಲ್ಲಿ ಉಂಟೋ ಅವರು ಬ್ರಹ್ಮಜಿಜ್ಞಾಸೆಗೆ ಪಾತ್ರರಾಗುವರು.

ಉದಾಹರಣೆಗೆ, ಆರಕ್ಷಕರ ಹುದ್ದೆ ಮತ್ತು ಅಭಿಯಂತರರ ಹುದ್ದೆಗಳನ್ನು ಗಮನಿಸಬಹುದು. ಆರಕ್ಷಕರ ಹುದ್ದೆಯಲ್ಲಿರುವವರಿಗೆ ಎತ್ತರ, ತೂಕ, ಆರೋಗ್ಯ, ಕಟ್ಟುಮಸ್ತಾದ ದೇಹ, ವ್ಯಾಯಾಮಪರಿಶ್ರಮ, ಕ್ರೀಡಾನೈಪುಣ್ಯ ಇತ್ಯಾದಿಗಳನ್ನು ನಿಗದಿಮಾಡಿ ಅದಕ್ಕನುಸಾರವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಅಭಿಯಂತರ ಹುದ್ದೆಯಲ್ಲಿರುವವರಿಗೆ ಅಂಗಸೌಷ್ಠವವು ಮುಖ್ಯವಾಗುವುದಿಲ್ಲ. ಅವರ ತಾಂತ್ರಿಕ ವಿಜ್ಞಾನದಲ್ಲಿ ಪಡೆದಿರುವ ನೈಪುಣ್ಯತೆಯನ್ನು ಪರಿಶೀಲಿಸಿ ಅದಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡಿರುತ್ತಾರೆ. ಒಂದು ಸೇತುವೆಯನ್ನು ನಿರ್ಮಾಣ ಮಾಡುವ ತಾಂತ್ರಿಕ ವಿಜ್ಞಾನಿಗೆ ವಿಶಾಲವಾದ ಎದೆಯಾಗಲೀ, ಬಲಿಷ್ಠವಾದ ಬಾಹುಗಳಾಗಲೀ ಇದ್ದೇ ಇರಬೇಕೆಂದೇನೂ ಇಲ್ಲ. ಅವನಿಗೆ ಬೇಕಿರುವುದು ತಾಂತ್ರಿಕ ವಿಜ್ಞಾನದ ಪರಿಣತಿ. ಹಾಗೆಯೇ ಲಾಠಿ-ಪ್ರಹಾರದ ಅಪ್ಪಣೆಯನ್ನು ಜಾರಿಮಾಡುವ ಪೊಲೀಸ್ ಸಿಬ್ಬಂದಿಗೆ ತಾಂತ್ರಿಕ ವಿಜ್ಞಾನಿಯಷ್ಟು ಸೂಕ್ಷ್ಮಬುದ್ಧಿಯ ಅಗತ್ಯವೇನೂ ಕಂಡುಬರುವುದಿಲ್ಲ. ಆದ್ದರಿಂದ ಆಯಾ ಕೆಲಸಗಳಿಗೆ ಅಗತ್ಯವಾದ ಗುಣವಿಶೇಷಗಳನ್ನು ಹೊಂದಿರುವಂತೆ ಮೋಕ್ಷಕ್ಕೆ ಮನೋಬುದ್ಧಿಗಳ ಧರ್ಮವನ್ನು ಪರಿಗಣಿಸುವುದೇ ವಿನಃ ಶಾರೀರಿಕ, ಲೌಕಿಕ ಬೇಧವನ್ನಲ್ಲ. ಜನ್ಮಜನ್ಮಗಳಲ್ಲಿ ಮಾಡಿರುವ ಸತ್ಕಮಗಳ ಪುಣ್ಯರಾಶಿಯೇ ಪರಮಾತ್ಮನ ಅನುಗ್ರಹ ರೂಪದಲ್ಲಿ ಫಲ ನೀಡುತ್ತಿರುವುದು ಎಂದು ನಾವೆಲ್ಲರು ಭಾವಿಸಬೇಕು.

Similar Posts

Leave a Reply

Your email address will not be published. Required fields are marked *