ಪ್ರಾಣಿಯಂತೆ ಮನುಷ್ಯನಾಗಿ ಹುಟ್ಟುವುದು ದುರ್ಲಭ. ಅದಕ್ಕಿಂತ ಪುರುಷತ್ವವಿರುವ ಜನ್ಮವೂ ಮತ್ತೂ ದುರ್ಲಭ. ಅದಕ್ಕಿಂತಲೂ ಸಾತ್ವಿಕ ಸ್ವಭಾವವಿರುವ ಹುಟ್ಟು ಇನ್ನೂ ವಿರಳ. ವಿಪ್ರತ್ವಕ್ಕಿಂತಲೂ ವೈದಿಕಮಾರ್ಗದಲ್ಲಿ ನಿಷ್ಠೆಯುಳ್ಳವನಾಗಿರುವುದು ಇನ್ನೂ ಅಪರೂಪ. ಅದಕ್ಕಿಂತಲೂ ಶೇಷ್ಠವಾದದ್ದು ವಿದ್ವತ್ತು. ಶಾಸ್ತ್ರಗಳಲ್ಲಿ ಅಡಗಿರುವ ಆಳವಾದ ಯಥಾರ್ಥಜ್ಞಾನವನ್ನು ಪಡೆಯುವುದು ಇನ್ನೂ ಕಷ್ಟ. ಆತ್ಮ ಮತ್ತು ಅನಾತ್ಮಗಳ ವಿವೇಕಜ್ಞಾನ, ಆಧ್ಯಾತ್ಮ ವಿದ್ಯೆಯಲ್ಲಿ ಗಾಢ ಅನುಭವ, ತನ್ನಲ್ಲಿರುವ ಆತ್ಮವೇ ಎಲ್ಲರಲ್ಲಿಯೂ ಇರುವುದೆಂಬ ಬ್ರಹ್ಮಭಾವದಲ್ಲಿರುವುದು ಕ್ರಮವಾಗಿ ಒಂದಕ್ಕಿಂತ ಇನ್ನೊಂದು ಶ್ರೇಷ್ಠವಾದದ್ದು. ಈ ಫಲವೂ ನೂರುಕೋಟಿ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯಗಳಿಂದಲ್ಲದೆ ಬೇರೆ ಯಾವುದರಿಂದಲೂ ಲಭಿಸುವುದಿಲ್ಲ.
ನಮ್ಮಲ್ಲಿರುವ ದೈವತ್ವಕ್ಕೆ ಜಾಗೃತರಾಗಿ ಅದರೊಡನೆ ನೇರ ಸಂಸರ್ಗ ಹೊಂದುವ ಕ್ರಮವು ಅತೀ ಕಠಿಣವೆಂದು ಶಂಕರರು ವಿವೇಕ ಚೂಡಾಮಣಿ ಗ್ರಂಥದ ಪ್ರಾರಂಭದಲ್ಲೇ ಓದುಗರಿಗೆ ಎಚ್ಚರಿಕೆಯನ್ನು ನೀಡುತ್ತಾರೆ. ವಿಶ್ವದಲ್ಲಿ ಅದೇಷ್ಟೋ ಜಾತಿಯ ಜೀವಜಂತುಗಳಿವೆ. ತ್ರಿಕಾಲಾಬಾಧಿತ ಸತ್ಯವೇ ಅವುಗಳಿಗೆಲ್ಲ ಅಧಿಷ್ಠಾನ. ಆ ಸತ್ಯವೇ ಎಲ್ಲಾ ಸೃಷ್ಠಿಗಳ ಮೂಲ. ಅಚೇತನವಾದ ಜಡವಸ್ತುಗಳಿಗೂ ಅದೇ ಆಧಾರ.
ಕಲ್ಲಿನಲ್ಲಿಯೂ ಸತ್ಯ ಪ್ರಕಟವಾಗುತ್ತದೆ. ತನ್ನ ಅಸ್ತಿತ್ವದ ಮೂಲಕ ತೋರಿಸಿಕೊಳ್ಳುತ್ತದೆ. ಆದರೆ ಕಲ್ಲಿಗೆ ಮಾತ್ರ ಅದರ ಅರಿವಿರುವುದಿಲ್ಲ. ಅದಕ್ಕಿಂತ ಒಂದು ಮೇಲಿನ ಮಟ್ಟ ಸಸ್ಯವರ್ಗ. ಇವು ಹೆಚ್ಚು ವಿಕಾಸ ಹೊಂದಿರುತ್ತದೆ ಮತ್ತು ಸಸ್ಯಕ್ಕೆ ಬಾಹ್ಯ ಪ್ರಪಂಚದ ಅರಿವುಂಟು. ಚೇತನಾ ಶ್ರೇಣಿಯಲ್ಲಿ ಕಲ್ಲಿಗಿಂತ ಸಸ್ಯವೂ ಒಂದು ಮಟ್ಟ ಮೇಲೆಯೇ. ಹೀಗೆ ನಾವು ಒಟ್ಟು ಪ್ರಾಣಿವರ್ಗವನ್ನು ವೀಕ್ಷಿಸಿದರೆ ಒಂದಕ್ಕಿಂತ ಒಂದು ಜೀವಿಯು ತನ್ನ ಸುತ್ತಮುತ್ತಲಿನ ಪ್ರಪಂಚದ ಅರಿವನ್ನು ಹೆಚ್ಚುಮಟ್ಟದಲ್ಲಿ ಪ್ರಕಟಿಸುವುದಲ್ಲದೆ, ತಮ್ಮೊಳಗಿನ ಭಾವನೆಗಳನ್ನೂ ಹೊರಗೆಡಹುತ್ತದೆ.
ಎಲ್ಲಾ ಜೀವರಾಶಿಗಳಲ್ಲಿ ಮಾನವನೇ ಮುಕುಟಪ್ರಾಯನಾಗಿದ್ದಾನೆ. ತನ್ನ ತೀಕ್ಷ್ಣಬುದ್ಧಿಯಿಂದ, ತಾರ್ಕಿಕ ಶಕ್ತಿಯಿಂದ ಭಾವನೆಗಳನ್ನು ಹತೋಟಿಯಲ್ಲಿಟ್ಟು ತನ್ನ ಮನಸ್ಸಿನ ಮೇಲೆ ಪ್ರಭುತ್ವ ಪಡೆದಿದ್ದಾನೆ. ತನ್ನ ಮನಸ್ಸಿನ ಶಕ್ತಿಯನ್ನು ಕ್ರೋಡೀಕರಿಸಿ ಪರಿಸರದ ವಸ್ತುಗಳನ್ನು ತನ್ನ ಉಪಯೋಗಕ್ಕೆ ಬಳಸಿಕೊಳ್ಳುತ್ತಾನೆ. ಕೇವಲ ಅಸ್ತಿತ್ವದಿಂದ ಮೇಲಕ್ಕೇರಿ ತಾನಿರುವ ಸನ್ನಿವೇಶದ ಸುಖಸೌಂದರ್ಯಗಳನ್ನು ಅನುಭವಿಸಿ, ಶಾಂತಿ ಸಂತೋಷಗಳನ್ನು ಪಡೆಯಲು ಯತ್ನಿಸುತ್ತಾನೆ. ಈ ಅರ್ಥದಲ್ಲಿಯೇ ನಮ್ಮ ಹಿಂದೂ ಧರ್ಮದ ಋಷಿವರ್ಯರು, ಮಾನವನು ಇತರೆ ಜೀವಿಗಳಿಗಿಂತ ಅತ್ಯಂತ ಶ್ರೇಷ್ಠವೆಂದು ಹೇಳಿದರೇ ವಿನಃ, ಯಂತ್ರ ನಿರ್ಮಾಣ ಶಕ್ತಿ ಅಥವಾ ತಾಂತ್ರಿಕ ಪ್ರಗತಿಯನ್ನು ನೋಡಿ ಹೇಳಿದಲ್ಲ. ಆಧುನಿಕ ವಿಜ್ಞಾನಿಗಳಂತೆ ನರನು ವಾನರನ ವಂಶಜನೆಂದು ಹೇಳಿದರೆ, ಮಾನವನ ಈಗಿನ ದುರವಸ್ಥೆಯನ್ನು ನೋಡಿ ಮಂಗಗಳು ತಮಗೆ ಅವಹೇಳನದ ಮಾತೆಂದುಕೊಂಡರೂ ಅಶ್ಚರ್ಯವಲ್ಲ..
ಆಧ್ಯಾತ್ಮಿಕ ಪ್ರಗತಿ ಮತ್ತು ಅದರ ಪರಿಪೂರ್ಣತೆಯನ್ನು ಗ್ರಹಿಸಿ, ಅನುಸರಿಸಿ, ಅಭ್ಯಸಿಸಿ ತಮ್ಮ ಸ್ವಾಧೀನ ಮಾಡಿಕೊಳ್ಳಬೇಕಾದರೆ, ಉತ್ತಮ ಮಾನಸಿಕ ಮಟ್ಟದ ಮಾನವನಿಗೆ ಮಾತ್ರ ಸಾಧ್ಯವೆಂದುಬುದು ಶಂಕರರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಸ್ವಾರ್ಥರಹಿತ ಶಾಸ್ತ್ರಸಮ್ಮತ ಕರ್ಮ, ಭಕ್ತಿ, ಜಪತಪ, ಪೂಜೆಪುನಸ್ಕಾರ ನಮ್ಮ ಅಂತಃಕರಣವನ್ನು ಶುದ್ಧಿ ಮಾಡುವ ಸಾಧನಗಳು. ಇದರಿಂದ ನಮ್ಮ ಆಂತರಿಕ ವ್ಯಕ್ತಿತ್ವ ಸಂಘಟತನೆಯಾಗುತ್ತದೆ. ಮನಸ್ಸಿನ ಹೊಯ್ದಾಟಗಳು ಕಡಿಮೆಯಾಗಿ ಏಕ್ರಾಗತೆ ಹೆಚ್ಚುತ್ತದೆ.
ವ್ಯಕ್ತಿತ್ವ ವಿಕಾಸವನ್ನೂ, ಮನಸ್ಸಿನ ಏಕ್ರಾಗತೆಯನ್ನೂ ಸಾಧಿಸಿದ ಮನುಷ್ಯನು ಶಾಸ್ತ್ರಗಳ ಅಧ್ಯಯನಕ್ಕೆ ಪಾತ್ರನಾಗುತ್ತಾನೆ. ಸಾಧನೆಯ ಗುರಿಯನ್ನೂ ಸಾಧನಾ ಕ್ರಮವನ್ನೂ ಅರಿರದವ ಬಹುಬೇಗ ತನ್ನ ಆಧ್ಯಾತ್ಮಿಕ ಆಸಕ್ತಿಯನ್ನು ಕಳೆದುಕೊಳ್ಳುತ್ತಾನೆ.
ನಿಃಸ್ವಾರ್ಥ ಕರ್ಮದಿಂದ ಅಂತಃಕರಣ ಶುದ್ಧಿ ಹೊಂದಿದ ಸಾಧಕನು ಏಕಾಗ್ರತೆಯಿಂದ ಶಾಸ್ತ್ರಾಧ್ಯಯನ ಮಾಡಿದರೆ, ಅವನಲ್ಲಿ ಆತ್ಮ-ಆನಾತ್ಮಗಳ ವಿವೇಕವು ಉದಿಸುವುದು. ಅವನ ಸಾಧನೆ ಮುಂದುವರಿದಾಗ ತನ್ನೊಳಗೆ ನೆಲೆಸಿರುವ ಅಂತರಾತ್ಮವೇ ಎಲ್ಲರ ಆತ್ಮ ಎಂಬ ಅರಿವು ಊಂಟಾಗುತ್ತದೆ. ಕಾಲಕ್ರಮೇಣ ಪರಮಾತ್ಮನ ಅನುಭವವು ಅಂತಹವನಿಗೆ ದೊರಕುವುದು.