ಜನಜೀವದಲ್ಲಿ ನವಚೇತನ ತುಂಬಲು, ಸಾಮಾಜಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಉತ್ಕ್ರಾಂತಿಯನ್ನುಂಟುಮಾಡಬೇಕೆಂದರೂ, ಮಾನವರೂಪದಲ್ಲಿ ಧರೆಗಿಳಿದು ಬಂದ ಭಗವಂತನಿಂದ ಮಾತ್ರ ಸಾಧ್ಯ. ಹೀಗಲ್ಲದೆ ಮತ್ತ್ಯಾವುದೇ ರೀತಿಯಲ್ಲಿ ಈ ಕಾರ್ಯವನ್ನು ಸಾಧಿಸುವುದನ್ನು ನಾವು ಕಲ್ಪಿಸಿಕೊಳ್ಳಲಾರೆವು. ಭಗವಂತನು ಮಾನವನಾಗಿ ಅವತರಿಸಿದಾಗ ತನ್ನ ಆದ್ಯಾಶಕ್ತಿಯನ್ನು ಆವಾಹನೆ ಮಾಡಿ, ಮಾನವಕಲ್ಯಾಣಕ್ಕಾಗಿ ನಿಯೋಜಿಸುತ್ತಾನೆ. ಅವತರಿಸಿ ಬಂದ ಭಗವಂತನ ಜೊತೆಯಲ್ಲಿ ಬಹಳಷ್ಟು ಸಲ ಆದ್ಯಶಕ್ತಿ ಆತನ ಲೀಲಾಸಂಗಾತಿಯಾಗಿ ಸ್ತ್ರೀರೂಪದಲ್ಲಿ ಬರುತ್ತಾಳೆ. ಶ್ರೀರಾಮನೊಂದಿಗೆ ಸೀತೆಯಾಗಿ, ಶ್ರೀಕೃಷ್ಣನೊಂದಿಗೆ ರುಕ್ಮಿಣಿಯಾಗಿ ಬಂದಂತೆ. ನವಯುಗದ ಅವತಾರಪುರುಷರಾದ, ‘ಅವತಾರವರಿಷ್ಠ’ ರೆಂದು ಬಣ್ಣಿಸಲ್ಪಟ್ಟ ಶ್ರೀರಾಮಕೃಷ್ಣರೊಂದಿಗೆ ಅವತರಿಸಿಬಂದವಳು ಭಗವತಿ, ಆದ್ಯಾಶಕ್ತಿ, ಪ್ರೇಮಮಯೀ, ಮಾತೃಹೃದಯೀ, ಇಷ್ಟದೇವತೆ, ಶ್ರೀಮಾತೆ ಶಾರದಾದೇವಿ.

ಯಾರು ಸರಸ್ವತಿಯಾಗಿ ಸರ್ವರಿಗೂ ವಿದ್ಯೆಯನ್ನು ದಯಪಾಲಿಸುವಳೋ, ಲಕ್ಷ್ಮಿಯಾಗಿ ಸಕಲ ಸಂಪತನ್ನೂ ಕರುಣಿಸುವಳೋ, ದುರ್ಗೆಯಾಗಿ ಕಷ್ಟಗಳನ್ನು ಪರಿಹರಿಸುತ್ತಾಳೋ ಅಂತೆಯೇ ದುಃಖದಾರಿದ್ರ್ಯಗಳಲ್ಲಿ ನೊಂದು ಬೆಂದವರಿಗೆ ದಾರಿಬೆಳಕಾಗಲು, ಪಾಪಕೂಪದಲ್ಲಿ ಬಿದ್ದವರನ್ನು ಮೇಲೆತ್ತಿ ಅನುಗ್ರಹಿಸಲು ಶ್ರೀಮಾತೆ ಶಾರದದೇವಿಯಾಗಿ ಬಂದಿರುತ್ತಾಳೆ. ಭಾರತೀಯ ಸ್ತ್ರೀಯರಿಗೆ ಆದರ್ಶಪ್ರಾಯರಾಗಿ ಶ್ರೀಮಾತೆಯು ಜೀವನವನ್ನು ನಡೆಸಿದರು. ಸಂಸಾರದಲ್ಲಿದ್ದರೂ ಸಂನ್ಯಾಸಿನಿಯಾಗಿ, ಪತ್ನಿಯಾಗಿದ್ದುಕೊಂಡು ಬ್ರಹ್ಮಚಾರಿಣಿಯಾಗಿ, ಮಾತೆಯಾಗಿ, ಮಾತೃಶಕ್ತಿಯ ಪ್ರತೀಕವಾಗಿ, ಸೌಶೀಲ್ಯ-ಸಚ್ಚಾರಿತ್ರ್ಯಮೂರ್ತಿಯಾಗಿ ಮೆರೆದರು. ತನ್ನ ಮಾತು, ಕೃತಿ, ನಡತೆ, ಆಲೋಚನೆ, ನಯವಿನಯಗಳಲ್ಲಿ ಎಳ್ಳಷ್ಟೂ ತಪ್ಪದೆ, ಅಂತರಂಗ, ಬಹಿರಂಗಗಳಲ್ಲಿ ಪರಿಶುದ್ಧರಾಗಿ ನಿರಾಡಂಬರ-ನಿರ್ವಿಕಾರತೆಗಳಿಂದ ಸೌಜನ್ಯದ ಪರಾಕಾಷ್ಠತೆಯನ್ನು ಮುಟ್ಟಿದವಳು. ಬೇಕಾದಷ್ಟು ವೇದಾಂತವ್ಯಾಸಂಗವನ್ನು ಮಾಡಬಹುದು. ಆದರೆ ನಿತ್ಯಜೀವನದಲ್ಲಿ ವೇದಾಂತದ ಆದರ್ಶಕ್ಕೆ ಚ್ಯುತಿಯಿಲ್ಲದಂತೆ ವ್ಯವಹಾರದಲ್ಲಿ ಲೋಪ ಬಾರದಂತೆ ಅವೆರಡರ ಸಮರಸವನ್ನು ಸಾಧಿಸಿ ಬಾಳುವೆ ನಡೆಸಬಲ್ಲವರೆಷ್ಟು ಮಂದಿ ನಮ್ಮಲ್ಲಿ ಸಿಗುತ್ತಾರೆ? ನೀರಿನಲ್ಲಿರುವ ಕಮಲಪತ್ರದ ಆದರ್ಶವನ್ನು ಇಟ್ಟುಕೊಂಡು ಕರ್ಮ ಮಾಡಬಲ್ಲವರೆಷ್ಟು ಮಂದಿ ಇದ್ದಾರೆ? ಜಗತ್ತನ್ನು ದೇವಾಲಯವೆಂದೂ ಜೀವನವನ್ನು ಶಿವನೆಂದೂ ತಿಳಿದು, ಆ ಶಿವನ ಸೇವೆಯನ್ನು ಮಾಡುವುದೇ ತಮ್ಮ ಕರ್ತವ್ಯವೆಂದು ತಿಳಿದು ಫಲಾಪೇಕ್ಷೆಯಿಲ್ಲದೆ ಕರ್ಮರಂಗವನ್ನು ಪ್ರವೇಶಿಸಬಲ್ಲವರೆಷ್ಟು ಮಂದಿ? ಅತಿ ವಿರಳವಾದ ಅಂತಹ ಕರ್ಮ ಯೋಗಿಗಳ ಪಂಕ್ತಿಯಲ್ಲಿ ಅಗ್ರಗಣ್ಯರು ಶ್ರೀಮಾತೆ.

ಹಾಲು ಮತ್ತು ಅದರ ಬಿಳುಪಿನಂತೆ, ಬೆಂಕಿ ಮತ್ತು ಅದರ ಶಾಖದಂತೆ, ಭಗವಂತನೂ ಮತ್ತು ಶಕ್ತಿಯೂ ಪರಸ್ಪರ ಅಭೇದ್ಯ. ಒಂದಿಲ್ಲದೆ ಮತ್ತೊಂದಿಲ್ಲ. ಜಗತ್ಕಲ್ಯಾಣವೆಂಬ ಒಂದೇ ಉದ್ದೇಶವಾದ್ದರೂ ಪುರುಷಶರೀರವನ್ನು ಧರಿಸಿದ ಭಗವಂತನ ಕಾರ್ಯವಿಧಾನ ಒಂದು ಬಗೆಯಾದರೆ, ಸ್ತ್ರೀಶರೀರಧಾರಿಣಿಯಾದ ಆದ್ಯಾಶಕ್ತಿಯ ವಿಧಾನವೇ ಮತ್ತೊಂದು ಬಗೆ.

ಅಂದಹಾಗೆ ಇಂದಿನ ಜಗತ್ತಿಗೆ ಬೇಕಾದದ್ದು ನೈತಿಕ ಉನ್ನತಿ ಮತ್ತು ಆಧ್ಯಾತ್ಮದ ಬೆಳಕು. ಮನುಷ್ಯನೊಳಗೆ ಶ್ರದ್ಧೆ, ಪರಿಶುದ್ಧತೆ ಹಾಗೂ ಭಗವತ್ಪ್ರೇಮ. ಇವು ಒಮ್ಮೆ ಜಾಗೃತವಾದರೆ ಸಾಕು, ಬಾಹ್ಯ ಪ್ರಪಂಚ ತಾನೇತಾನಾಗಿ ಪರಿವರ್ತನೆ ಹೊಂದುತ್ತದೆ, ಸುಧಾರಿಸುತ್ತದೆ. ಶಾರದಾ ಮಾತೆಯಾಗಿ ಅವತರಿಸಿದ ಆದ್ಯಾಶಕ್ತಿಯು ಅಂತಹ ಅಂತರಂಗದ ಹೋರಾಟವನ್ನು ಹತ್ತಿಕ್ಕುವುದರಲ್ಲಿ ನಿರತರಾಗಿದ್ದಾಳೆ. ಪಾಪಿಯನ್ನು ಪಾಪದ ಸಮೇತರಾಗಿ ಸಂಹರಿಸಿದರೂ ಜಯ ಪ್ರಾಪ್ತಿಯಾಗುತ್ತದೆ. ಹಾಗಲ್ಲದೆ ಸಹಜವಾದ ಪ್ರೇಮಪೂರ್ಣ ಶುಭೇಚ್ಚೆಯಿಂದ ಪಾಪಿಯನ್ನೇ ಪರಿವರ್ತಿಸಿದರೂ ಜಯಪ್ರಾಪ್ತಿಯಾದಂತೆ. ನಿಮಗೆ ತಿಳಿದಿರಲಿ ಪಾಪಿಯನ್ನು ಸಂಹರಿಸುವ ಕಾರ್ಯಕ್ಕಿಂತ ಅವನ ದುಷ್ಟಹೃದಯವನ್ನು ಪರಿವರ್ತನೆ ಗೊಳಿಸುವ ಕಾರ್ಯಕ್ಕೆ ಅಧಿಕ ಸಹನೆ ಬೇಕು; ಅಧಿಕ ಬಲಬೇಕು. ಈ ಬಲವನ್ನು ನಾವು ಶ್ರೀಮಾತೆಯವರಲ್ಲಿ ಕಾಣಬಹುದು. ಇಲ್ಲಿ ಆಯುಧಗಳ ಝಣತ್ಕಾರವಿಲ್ಲ; ಯುದ್ಧದ ಘೋಷಣೆಯಿಲ್ಲ. ಸಮೃದ್ಧಿಯಾಗಿರುವುದು ವಿನಯ, ನಮ್ರತೆ, ಲಜ್ಜೆ, ಪಾವಿತ್ರ್ಯ ಶ್ರೇಯೋಭಿಲಾಷೆ, ಪ್ರೇಮ ಹಾಗೂ ಆತ್ಮಾನುಭವ. ಶ್ರೀಮಾತೆಯರವರಲ್ಲಿ ನಾಶಗೊಳಿಸುವ ಉದ್ದೇಶವಿಲ್ಲ; ಪೂರ್ಣಗೊಳಿಸುವ ಸದಭಿಲಾಷೆ- ಮಾನವನ ಪಥದಲ್ಲಿ ಬರಬಹುದಾದ ಅಡೆತಡೆಗಳನ್ನು ನಿವಾರಿಸಿ ನೂತನ ಸಾಧನಾವಿಧನಾವನ್ನು ಸ್ಥಾಪಿಸುವ ಸದಭಿಲಾಷೆ.

ಸಹಜ ತಾಯ್ತನದ ಪ್ರಭಾವದಿಂದ ಕೆಟ್ಟ ಜನಗಳ ಸ್ವಭಾವವೂ ಸುಧಾರಣೆಗೊಳ್ಳುತ್ತಿತ್ತು, ಪಾತಕಿಗಳು ಶ್ರೀಮಾತೆಯರೆದುರಿನಲ್ಲಿ ಸಭ್ಯರಾಗಿ ನಡೆದುಕೊಳ್ಳುತ್ತಿದ್ದರಷ್ಟೇ ಅಲ್ಲದೇ ಕೆಲವು ಸಲ ಸಂಪೂರ್ಣ ಪರಿವರ್ತನೆ ಹೊಂದುತ್ತಿದ್ದರು. ಇದಕ್ಕೆ ಉದಾಹರಣೆಯಾಗಿ
ಒಮ್ಮೆ ಶ್ರೀಮಾತೆ ಜಯರಾಂಬಾಟಿಯಿಂದ ದಕ್ಷಿಣೇಶ್ವರಕ್ಕೆ ಪ್ರಯಾಣ ಮಾಡುತ್ತಿದ್ದಾಗ ಅವರ ಜೊತೆಯವರೆಲ್ಲ ಮುಂದೆ ನಡೆದು ಹೊರಟುಹೋದರು. ಅಷ್ಟೋತ್ತಿಗೆ ರಾತ್ರಿಯಾಗಿತು ಶ್ರೀಮಾತೆ ಏಕಾಂಗಿಯಾಗಿ ಕಾಡಿನ ಮಧ್ಯದಲ್ಲಿ ಉಳಿದರು, ಒಬ್ಬ ಭೀಮಾಕಾರದ ಕರಾಳ ವ್ಯಕ್ತಿ ದೊಡ್ಡ ದೊಣ್ಣೆಯನ್ನು ಹಿಡಿದುಕೊಂಡು ಅವರ ಹತ್ತಿರಕ್ಕೆ ಬಂದು “ಏಯ್ ! ಯಾರದು ಇಷ್ಟು ಹೊತ್ತಿನಲ್ಲಿ ಇಲ್ಲಿ ನಿಂತಿರುವುದು! ಎಲ್ಲಿಗೆ ಹೋಗುತ್ತಿದ್ದೀ ನೀನು?” ಎಂದು ಗರ್ಜಿಸಿದ. ಆದರೆ ಶ್ರೀಮಾತೆ ನಿರ್ವಿಕಾರಚಿತ್ತದಿಂದ “ ಅಪ್ಪಾ, ನನ್ನ ಜೊತೆಯವರೆಲ್ಲ ಮುಂದೆ ಹೊರಟು ಹೋದರು, ನಾನು ನೋಡಿದರೆ ದಾರಿ ತಪ್ಪಿದ್ದೇನೆ ನಿನ್ನ ಅಳಿಯಂದಿರು ದಕ್ಷಿಣೇಶ್ವರದ ಕಾಳೀದೇವಾಲಯದಲ್ಲಿ ವಾಸವಾಗಿದ್ದಾರೆ. ನಾನೀಗ ಅವರ ಬಳಿಗೇ ಹೋಗುತ್ತಿರುವುದು. ನೀನು ನನ್ನನ್ನು ಅವರ ಬಳಿಗೆ ಕರೆದುಕೊಂಡು ಹೋಗಿ ಬಿಟ್ಟರೆ ಅವರು ನಿನ್ನನ್ನು ತುಂಬಾ ವಿಶ್ವಾಸದಿಂದ ಕಾಣುತ್ತಾರೆ” ಎಂದು ಹೇಳಿದರು. ಆ ವೇಳೆಗೆ ಆ ಡಕಾಯಿತನ ಪತ್ನಿಯೂ ಅಲ್ಲಿಗೆ ಬಂದಳು. ಶ್ರೀಮಾತೆ ಓಡಿಹೋಗಿ ಆಕೆಯ ಕೈಹಿಡಿದುಕೊಂಡು ಅತ್ಯಂತ ವಿಶ್ವಾಸದಿಂದ “ಅಮ್ಮ, ನಾನು ನಿಮ್ಮ ಮಗಳು ಶಾರದೆ. ನನ್ನ ಜೊತೆಯವರೆಲ್ಲ ಮುಂದೆ ಹೊರಟುಹೋದದ್ದರಿಂದ ನಾನು ಈ ಭಯಂಕರ ಸ್ಥಿತಿಗೆ ಸಿಕ್ಕಿಕೊಂಡೆ. ನನ್ನ ಪುಣ್ಯಕ್ಕೆ, ಅದೃಷ್ಟ ಚೆನ್ನಾಗಿದ್ದು ನೀನು ತಂದೆಯೂ ಬಂದುಬಿಟ್ಟರಿ ಇಲ್ಲದೆಹೋಗಿದ್ದರೆ ನನ್ನ ಗತಿ ಏನಾಗುತ್ತಿತ್ತೋ ಏನೋ ಹೇಳಲಾರೆ.” ಶ್ರೀಮಾತೆಯ ಈ ಮುಗ್ದ ಸರಳ ವಿಶ್ವಾಸಯುತ ನಡೆವಳಿಕೆ ಡಕಾಯಿತ ದಂಪತಿಗಳ ಹೃದಯವನ್ನು ಕರಗಿಸಿತು. ಹಿಂಸೆ ಮಾಡಲು ಬಂದ ಕಟುಕನನ್ನು ‘ತಂದೆ’ ಎಂದು ಸಂಭೋದಿಸಿದ ಶಾರದಾದೇವಿಯವರ ಸರಳತೆ- ಧೈರ್ಯಗಳನ್ನು ಅಳೆಯಲು ಸಾಧ್ಯವೆ? ಕೇವಲ ಒಂದು ರಾತ್ರಿಯಲ್ಲೇ ಆ ದರೋಡೆಕೋರರ ಹೃದಯದಲ್ಲಿ ಶುದ್ಧ ಪ್ರೇಮವನ್ನು ಜಾಗೃತಗೊಳಿಸಿದ ಶ್ರೀಮಾತೆಯ ದಿವ್ಯ ವ್ಯಕ್ತಿತ್ವವನ್ನು ಅರಿಯಲು ಯಾರಿಗೆ ಸಾಧ್ಯ? ಅಸಾಧಾರಣ ಸಹಿಷ್ಣುತೆ-ಸರಳತೆಗಳು ಶ್ರೀಮಾತೆಯವರಲ್ಲಿ ಪೂರ್ಣವಾಗಿ ವ್ಯಕ್ತವಾಗಿದ್ದವು. ಗಾಂಭೀರ್ಯವೇ ಮೈವೆತ್ತಂತಿದ್ದರು. ಶ್ರೀಮಾತೆಯ ವಾತ್ಸಲ್ಯವು ಜಾತಿ-ಕುಲ, ಗುಣ-ದೋಷ,ಲೌಕಿಕ ಸ್ಥಿತಿಗತಿ ಎಲ್ಲಾ ಅಂಶಗಳನ್ನು ಮೀರಿ ನಿಂತಿತ್ತು. ಶರಣಾದವರು ಎಂಥವರೇ ಆಗಿದ್ದರೂ ಅವರಿಗೆ ಶ್ರೀಮಾತೆಯ ವಾತ್ಸಲ್ಯಸುಧೆ ಸಿಗುತ್ತಿತ್ತು. ತಮ್ಮ ಬಳಿಗೆ ಬಂದವರ ದೋಷ ದೌರ್ಬಲ್ಯಾದಿಗಳನ್ನೂ ತಿಳಿದೂ ಕೂಡ ಆತನನ್ನು ಹೃತ್ಪೂರ್ವಕವಾಗಿ ಪ್ರೀತಿಸುವುದರ ಜೊತೆಗೆ ಆತನಿಗೆ ಅಗತ್ಯವಿರುವ ಎಲ್ಲಾ ನೆರವನ್ನೂ ಸಹಾನು ಭೂತಿಯನ್ನೂ ಕೊಡುತ್ತಿದ್ದರು.

ಶ್ರೀಮಾತೆಯ ಶ್ರದ್ಧೆಯ ಆಳವನ್ನೂ, ಸ್ವಭಾವದ ಸರಳತೆಯನ್ನೂ, ಹೃದಯದ ಪರಿಶುದ್ಧತೆಯನ್ನೂ ಬಿಚ್ಚಿ ತೋರಿಸುವ ಅನೇಕ ಘಟನೆಗಳು ಅವರ ಜೀವನದಲ್ಲಿ ನಡೆದಿದೆ. ಅವುಗಳನ್ನು ತಿಳಿದುಕೊಂಡಾಗ ಶ್ರೀಮಾತೆಯವರು ಎಂತಹ ಅದ್ಭುತ ಆದರ್ಶವ್ಯಕ್ತಿಯೆಂಬುದು ನಮಗೆ ಗೊತ್ತಾಗುತ್ತದೆ. ಒಂದು ಸಲ ಶ್ರೀಮಾತೆಯವರು ಬೃಂದಾವನಕ್ಕೆ ಹೋದಾಗ ಅಲ್ಲಿರುವ ರಾಧಾರಮಣನ ಮುಂದೆ ದೈನ್ಯಭಾವದಿಂದ ಪ್ರಾರ್ಥಿಸುತ್ತಾರೆ. “ಇತರರಲ್ಲಿ ಹುಳುಕು ಹುಡುಕುವ ದುಷ್ಟಸ್ವಭಾವ ನನ್ನಲ್ಲಿ ಸುಳಿಯದಂತೆ ಮಾಡು, ಪ್ರಭುವೇ !” ನಾನು, ನೀವುಗಳಾದರೆ ಭಗವಂತನಲ್ಲಿ ಪ್ರಾರ್ಥಿಸುವುದೇ ಆಸೆಆಕಾಂಕ್ಷೆಗಳನ್ನು ಆದರೆ ಜಗಜ್ಜನನಿಯ ಆ ಪ್ರಾರ್ಥನೆ ಸಿದ್ಧಿಸಿತೆನ್ನುವುದಕ್ಕೆ ಅವರ ಮುಂದಿನ ಜೀವನವೇ ಸಾಕ್ಷಿ. ಇತರರಲ್ಲಿ ಅವರು ತಪ್ಪುಗಳನ್ನು ಕಾಣುತ್ತಿರಲಿಲ್ಲ ಮಾತ್ರವಲ್ಲದೇ, ತಮ್ಮ ಶಿಷ್ಟಸಂಗಾತಿಗಳಲ್ಲಿ ಈ ಸ್ವಾಭಾವವನ್ನು ಕಂಡಾಗ, ‘ತಪ್ಪು ಮಾಡುವುದು ಮಾನವನ ಹುಟ್ಟುಗುಣ. ಅದನ್ನು ಖಂಡಿಸುವುದರಿಂದ ತಿದ್ದಿದಂತಾಗುವುದಿಲ್ಲ. ಅದರ ಬದಲು ಅವನಲ್ಲಿರುವ ಒಳ್ಳೆಯ ಗುಣಗಳನ್ನೇ ಕಾಣುವುದರ ಮೂಲಕ ತಪ್ಪುಗಳು ಹುಟ್ಟಿದಲ್ಲಿಯೇ ಮಾಯವಾಗುವಂತೆ ಮಾಡಬಹುದು’ ಎಂದು ಬುದ್ಧಿ ಹೇಳುತ್ತಿದ್ದರು. ಸದಾ ತಪ್ಪುಗಳನ್ನೇ ಹುಡುಕುತ್ತಿರುವವರ ದೃಷ್ಟಿ ಅಶುದ್ಧವಾಗುವುದೆಂದು ಶ್ರೀಮಾತೆಯವರು ಆಗಾಗ ಎಚ್ಚರಿಸುತ್ತಿದ್ದರು.

ಪೂರ್ಣ ಯೌವನಭರಿತರಾದ ಶಾರದಾದೇವಿ ಪತಿಯಾದ ಶ್ರೀರಾಮಕೃಷ್ಣರ ಪಾದಸೇವೆಯಲ್ಲಿ ನಿರತರಾಗಿದ್ದಾಗ ತಮ್ಮ ಪತಿ ತಮ್ಮನ್ನು ಯಾವ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ಪ್ರಶ್ನಿಸಿದಾಗ ಪಾಂಚಜನ್ಯದಂತೆ ಮೊಳಗಿದ ಉತ್ತರವೇ “ಮಂದಿರದಲ್ಲಿ ಪೂಜಿಸಲ್ಪಡುತ್ತಿರುವ ಜಗನ್ಮಾತೆ, ನಹಬತ್‌ಖಾನೆಯಲ್ಲಿ ವಾಸಿಸುತ್ತಿರುವ ನನ್ನ ಜನ್ಮದಾತೆ, ಅವಳೇ ಈಗ ಇಲ್ಲಿ ನನ್ನ ಕಾಲುಗಳನ್ನು ಒತ್ತುತ್ತಾ ಕುಳಿತಿದ್ದಾಳೆ. ನಾನು ನಿನ್ನನ್ನು ಯಾವಾಗಲೂ ಆನಂದಮಯೀ ಜಗನ್ಮಾತೆಯೇ ಮೈದಳೆದುಬಂದಿರುವಂತೆ ಕಾಣುತ್ತಿದ್ದೇನೆ.” ಶ್ರೀರಾಮಕೃಷ್ಣರ ನೂತನಾದ್ಭುತವಾದ ತ್ಯಾಗವನ್ನು ಕುರಿತು ಮಾತನಾಡುವಾಗ ಅಷ್ಟೇ ಅದ್ಭುತವಾದ ಶಾರದಾದೇವಿಯವರ ಸಂಯಮ ಸಹನೆಗಳನ್ನು ಗಮನಿಸಲೇಬೇಕು. “ನೀನು ನನ್ನನ್ನು ಸಂಸಾರಕ್ಕೆ ಎಳೆಯಲು ಆಶಿಸಿದರೆ ವಿವಾಹ ಧರ್ಮಕ್ಕೆ ಅನುಗುಣವಾಗಿ ನಿನ್ನಿಚ್ಛೆಯನ್ನು ನೆರವೇರಿಸಲು ನಾನು ಸಿದ್ಧನಿದ್ದೇನೆ” ಎಂದು ಶ್ರೀರಾಮಕೃಷ್ಣರು ಹೇಳಿದಾಗ ಶ್ರೀಮಾತೆ ಇಷ್ಟಪಟ್ಟಿದ್ದರೆ ಶ್ರೀರಾಮಕೃಷ್ಣರನ್ನು ಸಂಸಾರದ ಸುಳಿಗೆ ಸಿಕ್ಕಿಸಬಹುದಾಗಿತ್ತು. ಅವರಿಗೆ ಆ ಅಧಿಕಾರವಿತ್ತು. ಆದರೆ ಅದ್ಭುತವಾದ ಸಂಯಮವುಳ್ಳ ಶ್ರೀಮಾತೆಯ ಬಾಯಿಂದ ತಡೆಯಿಲ್ಲದೆ ಬಂದ ಉತ್ತರವು ಅವರ ಸತ್ತ್ವ-ಸಾಮರ್ಥ್ಯಗಳನ್ನು ಜಗತ್ತಿಗೇ ಪ್ರಕಟಪಡಿಸಿತು: “ನಾನು ನಿಮ್ಮ ಸಹಧರ್ಮಿಣಿ. ನಿಮ್ಮ ಧರ್ಮಜೀವನಕ್ಕೆ ಅನುಕೂಲೆಯಾಗುವುದೇ ನನ್ನ ಪರಮ ಕರ್ತವ್ಯ. ನಿಮ್ಮ ಮಹಾ ಆದರ್ಶವೇ ನನ್ನ ಆದರ್ಶ. ನಿಮ್ಮನ್ನು ಮಾಯೆಗೆ ಎಳೆಯಲು ನಾನೆಂದೂ ಬಯಸೆನು.” ಶ್ರೀಮಾತೆಯ ಪವಿತ್ರ ಹೃದಯ ಮತ್ತು ದೃಢ ಸಂಯಮ ಶ್ರೀರಾಮಕೃಷ್ಣರಿಗೆ ಪರಮಾನಂದವನ್ನುಂಟುಮಾಡಿದುವು. ಇದರ ಫಲವಾಗಿ ಶ್ರೀಮಾತೆಯವರು ಲೋಕಮಾತೆಯಾದರು.

ಶ್ರೀರಾಮಕೃಷ್ಣರಿಂದ ಅನೇಕ ವಿಷಯಗಳಲ್ಲಿ ಉತ್ಕೃಷ್ಟ ಶಿಕ್ಷಣವನ್ನು ಪಡೆದರು. ನಿರಂತರವಾದ ಸಾಧನೆಯಿಂದ, ಅದ್ಭುತವಾದ ಪತಿಸೇವೆಯಿಂದ, ಸದ್ಗುರುದೇವನ ಕೃಪಾಮಹಿಮೆಯಿಂದ ಶ್ರೀಮಾತೆ ಇಡೀ ಲೋಕಕ್ಕೆ ಆದರ್ಶ ಸ್ತ್ರೀಯಾದರು.

ಶ್ರೀರಾಮಕೃಷ್ಣರ ಮಹಾಸಮಾಧಿಯ ನಂತರ ಶ್ರೀಶಾರದದೇವಿಯವರು ಅನೇಕ ವಿಧವಾದ ಕಷ್ಟ ಕಾಠಿಣ್ಯಗಳನ್ನು ಎದುರಿಸಬೇಕಾಯಿತು. ಅವರು ಪಟ್ಟ ಕಷ್ಟ ಊಹೆಯ ಮಿತಿಯನ್ನು ಮೀರುವಂಥದು. ಅವತಾರಿಣಿ ಎಂದು ಪೂಜಿಸಲ್ಪಡುವ ಶ್ರೀಮಾತೆಯು ಉಪ್ಪಿಗೆ ಕಾಸಿಲ್ಲದೆ ಸಪ್ಪೆ ಅನ್ನವನ್ನು ಉಣ್ಣುತ್ತಿದ್ದರು. ಜೀವನನಿರ್ವಹಣೆಗಾಗಿ ಕೈಯಲ್ಲಿ ಗುದ್ದಲಿಯನ್ನು ಹಿಡಿದು ಭೂಮಿಯನ್ನು ಅಗೆದು, ತರಕಾರಿಗಳನ್ನು ಬೆಳೆಯುತ್ತಿದ್ದರು. ಅವರ ಜೀವನ ಅಷ್ಟು ಕಷ್ಟಮಯವಾಗಿದ್ದರೂ ಅವುಗಳನ್ನವರು ಶ್ರೀರಾಮಕೃಷ್ಣರಲ್ಲಿಟ್ಟಿದ್ದ ಅಚಲವಾದ ಶ್ರದ್ಧೆಯ ಬಲವೊಂದರಿಂದಲೇ ಯಶಸ್ವಿಯಾಗಿ ಎದುರಿಸಿದರು. ಈ ಆರ್ಥಿಕಸಂಕಟದ ಜೊತೆಗೆ ಸಂಪ್ರದಾಯ ಶರಣರ ಅಬ್ಬರ ಬೇರೆ. ಪತಿಯ ನಿರ್ಗಮನವಾದ ಮೇಲೂ ಶಾರದಾದೇವಿಯವರು ತಮ್ಮ ಕೈಬಳೆಗಳನ್ನು ತೆಗೆಯಲಿಲ್ಲವೆಂದು ಟೀಕೆಗಳ ಸುರಿಮಳೆಯೇ ಆಯಿತು. ಶ್ರೀಮಾತೆಯವರ ಕೋಮಲಹೃದಯ ಇವುಗಳಿಂದ ಬಹಳ ಗಾಸಿಗೊಂಡರೂ ಅವರು ಬಳೆಗಳನ್ನು ತೆಗೆಯದಂತೆ ಶ್ರೀರಾಮಕೃಷ್ಣರು ದರ್ಶನಕೊಟ್ಟು ಆದೇಶವನ್ನಿತ್ತರು. ಸ್ತ್ರೀಯಾದವಳಿಗೆ ಪತಿ ಸಾಕ್ಷಾತ್ ಚಿನ್ಮಯರೂಪಿ ಎಂಬ ಅಂಶ ಅವರಿಗೆ ಅನುಭವವಾಯಿತು. ಕಷ್ಟದ ಕುಲುಮೆಯಲ್ಲಿ ಯಶಸ್ವಿಯಾಗಿ ಹಾದುಬಂದರು ಶ್ರೀಮಾತೆ.

ಶ್ರೀರಾಮಕೃಷ್ಣರ ಆಜ್ಞೆಯಂತೆ ಶ್ರೀಮಾತೆ ಗುರುವಿನ ಸ್ಥಾನವನ್ನೇರಿದರು. ಈ ಸ್ಥಾನ ಬರಿ ಪಾಂಡಿತ್ಯದ ಪೀಠವಲ್ಲ. ಅನುಭವದ ಆಳದಲ್ಲಿ ಮುಳುಗಿ, ದಿವ್ಯಜ್ಞಾನದ ಬೆಳಕನ್ನು ಕಂಡು, ದಿವ್ಯಪ್ರೇಮದ ಸುಧೆಯನ್ನುಂಡು, ಪರಾತ್ಪರ ವಸ್ತುವಿನಿಂದ ಅನುಜ್ಞೆ-ಅಧಿಕಾರಗಳನ್ನು ಪಡೆದುಬಂದವರು ಮಾತ್ರ ಗುರುವಿನ ಸ್ಥಾನಕ್ಕೆ ಅರ್ಹರು. ಗುರುವಿನ ಕೆಲಸ ಬರಿಯ ಉಪದೇಶವನ್ನು ಕೊಡುವುದಲ್ಲ ; ಶಿಷ್ಯನಾದವನಿಗೆ ದಾರಿ ತೋರುವುದು ಮಾತ್ರವಲ್ಲ ; ಆ ದಾರಿಯಲ್ಲಿ ನಡೆಯಲು ಅಗತ್ಯವಾದ ಚೈತನ್ಯ ಸ್ಫೂರ್ತಿಗಳನ್ನು ಶಿಷ್ಯನಾದವನಲ್ಲಿ ತುಂಬಬೇಕಾದ್ದು ಅತ್ಯಂತ ಮುಖ್ಯ. ಅಂತಹ ಚೈತನ್ಯ ಸ್ಫೂರ್ತಿಗಳನ್ನು ಕೊಡಲು ಗುರುವಾದವನು ತನ್ನ ತಪಸ್ಸಿನ ಫಲವನ್ನೇ ಶಿಷ್ಯನಿಗೆ ಧಾರೆಯೆರೆದು, ಶಿಷ್ಯನ ಪಾಪಫಲಗಳನ್ನು ತಾನು ಅನುಭವಿಸಬೇಕಾಗುತ್ತದೆ. ತನ್ನ ಸ್ವಂತ ಮುಕ್ತಿಯನ್ನು ಬದಿಗಿಟ್ಟು ಶಿಷ್ಯನಾದವನ ಮುಕ್ತಿಯನ್ನು ಸಾಧಿಸಬೇಕಾಗುತ್ತದೆ. ಆದರಿಂದಲೇ ಗುರುವಿನ ಸ್ಥಾನಕ್ಕೆ ಅಂತಹ ಮಹತ್ವ. ಶ್ರೀಮಾತೆಯವರ ಉಜ್ವಲವಾದ ಬ್ರಹ್ಮಚರ್ಯ, ತೀವ್ರವಾದ ತಪಸ್ಸು, ಪರಿಶುದ್ಧವಾದ ಜೀವನ, ಆತ್ಮಸಾಕ್ಷಾತ್ಕಾರ ಹಾಗೂ ಶ್ರೀರಾಮಕೃಷ್ಣರ ನಿರಂತರ ಸಾನ್ನಿಧ್ಯ ಅವರಿಗೆ ಆ ಗುರುವಿನ ಸ್ಥಾನವನ್ನೇರಲು ಅರ್ಹತೆಯನ್ನು ಕೊಟ್ಟಿದ್ದುವು. ಆಚಾರ್ಯಪೀಠ ಅಗ್ನಿಯ ಆಸನವೆಂಬುದು ಶ್ರೀಮಾತೆಯವರಿಗೆ ಗೊತ್ತಿತ್ತು. ಆದರೆ ಅವರ ಮಾತೃಹೃದಯ ಈ ಕಷ್ಟಗಳನ್ನು ಲೆಕ್ಕಿಸಲಿಲ್ಲ, ಈ ಬೆಂಕಿಗೆ ಬೆದರಲಿಲ್ಲ.

ಶ್ರೀರಾಮಕೃಷ್ಣರು ಶ್ರೀಮಾತೆಯವರನ್ನು ಮಾತೆಯೆಂದು ಅರ್ಚಿಸಿದ್ದರಲ್ಲಿ ಗಹನವಾದ ಅರ್ಥವಿದೆ. ದುಃಖಿಗಳು ಯಾರೇ ಬರಲಿ, ಅವರಿಗೆ ಶ್ರೀ ಶಾರದಾದೇವಿಯವರ ಆಶ್ರಯ ಸದಾಸಿದ್ಧ. ತಮ್ಮನ್ನು ಆಶ್ರಯಿಸಿ ಬಂದವರ ದುಃಖ ದೂರವಾದರೆ ಅವರಿಗಿಂತ ಶ್ರೀಮಾತೆಯವರೇ ಹೆಚ್ಚು ಸಂತೋಷಪಡುತ್ತಿದ್ದರು. ಶ್ರೀಮಾತೆಯವರ ಮಾತೃಪ್ರೇಮಕ್ಕೆ ಮೇಲುಕೀಳೆನ್ನುವುದರ ಪರಿವೆಯೇ ಇರಲಿಲ್ಲ. ಒಮ್ಮೆ ಶಿಷ್ಯನೊಬ್ಬ ತಮ್ಮ ಪಾದಸ್ಪರ್ಶ ಮಾಡಲು ಹಿಂಜರಿಯುತ್ತಿದ್ದಾಗ ಶ್ರೀಮಾತೆ “ಮಗೂ, ನಾವು ಹುಟ್ಟಿರುವುದೇ ಅದಕ್ಕಾಗಿ, ಇತರರ ಪಾಪಗಳನ್ನೂ ದುಃಖಗಳನ್ನೂ ಭರಿಸಲು ನಾವೇ ಹಿಂದೆಗೆದರೆ, ಮತ್ತಾರು ಹಾಗೆ ಮಾಡಬೇಕು ?” ಎಂದು ಸಂತೈಸಿ ಹರಸುತ್ತಾರೆ. ಅಪವಿತ್ರ ಜೀವಿಗಳನೇಕರು ಅವರ ಪಾದಸ್ಪರ್ಶದಿಂದ ಪುನೀತರಾದುದುಂಟು. ಇದರಿಂದ ಶ್ರೀಮಾತೆಯವರಿಗೆ ದೈಹಿಕವಾಗಿ ಆಗುತ್ತಿದ್ದ ಯಾತನೆ ವರ್ಣನಾತೀತವಾದುದು. ಆದರೂ ತಮ್ಮನ್ನು ನಂಬಿ ಬಂದವರನ್ನು ಶ್ರೀಮಾತೆಯವರು ಎಂದೂ ಕೈಬಿಡುತ್ತಿರಲಿಲ್ಲ. ತಮ್ಮ ಅನುದಿನದ ಜಪತಪಗಳೆಲ್ಲ ಶಿಷ್ಯರ ಮೇಲ್ಮಗಾಗಿಯೇ ಎಂದು ಶ್ರೀಮಾತೆ ಹೇಳುತ್ತಿದ್ದುದುಂಟು. ಪ್ರತಿಯೊಂದು ಕೃತಿಯಲ್ಲೂ ಶ್ರೀಮಾತೆಯ ಮಾತೃಹೃದಯ ಎದ್ದು ಕಾಣುತ್ತಿತ್ತು. ಕೇವಲ ಸಂಕಲ್ಪ ಮಾತ್ರದಿಂದ ಒಂದು ಜೀವನವನ್ನೇ ಮಾರ್ಪಡಿಸಬಲ್ಲ ಅದ್ಭುತ ಶಕ್ತಿ ಶ್ರೀಮಾತೆಯಲ್ಲಿತ್ತು. ಅವರು ಇಚ್ಛಾಮಾತ್ರದಿಂದ ರೋಗರುಜಿನಗಳನ್ನು ಹೋಗಲಾಡಿಸಬಲ್ಲವರಾಗಿದ್ದರು ; ಪುತ್ರಸಂಪತ್ತಿಯನ್ನು ಅನುಗ್ರಹಿಸ ಬಲ್ಲವರಾಗಿದ್ದರು. ಆದರೂ ತಮ್ಮ ಈ ಶಕ್ತಿಯನ್ನು ಅವರು ವಿಶೇಷವಾಗಿ ಉಪಯೋಗಿಸುತ್ತಿರಲಿಲ್ಲ. ಇಂತಹ ಅದ್ಭುತ ಶಕ್ತಿಯಿದ್ದರೂ, ಶ್ರೀಮಾತೆ ತೋರಿಕೆಗೆ ಸಾಮಾನ್ಯ ಸ್ತ್ರೀಯಂತೆಯೇ ಇದ್ದರು. ಅವರ ನಡೆನುಡಿಗಳಲ್ಲಿ ಆಡಂಬರದ ಸುಳಿವಿರಲಿಲ್ಲ. ಅವರ ಮಂತ್ರ ದೀಕ್ಷಾವಿಧಿಯಾದರೋ ಆಡಂಬರಕ್ಕೆಡೆಯಿಲ್ಲದಂತೆ ಆದಷ್ಟು ಸ್ವಲ್ಪ ವಿಧಿಗಳಿಂದಲೇ ನಡೆಯುತಿತ್ತು. ಆದರಿಂದಲೇ ಶ್ರೀಮಾತೆಯವರ ನಿಜವಾದ ಸ್ವರೂಪ ಅನೇಕರಿಗೆ ಅರ್ಥವಾಗಲಿಲ್ಲ.

ಶ್ರೀಮಾತೆಯ ವ್ಯಕ್ತಿತ್ವ ಅಸಾಧಾರಣವಾದುದೆಂಬುದು ಅವರ ಜೀವನವನ್ನು ಅಧ್ಯಯನ ಮಾಡಿದಾಗ ಅರಿವಾಗದಿರದು. ಅವರ ಮುಖ ಎಳೆಯ ಮಗುವಿನಂತೆ ಶೋಭಿಸುತ್ತದೆ. ಅದರಲ್ಲಿ ಕೊಂಕು ಬಿಂಕಗಳಿಲ್ಲ. ಅವರ ಕಣ್ಣುಗಳಲ್ಲಿ ಬೆರಗುಗೊಳಿಸುವ ಉಜ್ವಲವಾದ ತೇಜಸ್ಸಿದೆ, ಮರುಳುಗೊಳಿಸುವ ಚಂಚಲತೆಯಿಲ್ಲ. ಅವರ ದೃಷ್ಟಿಯಲ್ಲಿ ವಿರಕ್ತಿಯ ವೈಭವವಿದೆ, ಮಾತೃಹೃದಯದ ಪ್ರೇಮವಿದೆ, ಸಂಯಮದ ನಿಷ್ಟುರತೆಯೂ ಇದೆ. ಅವರ ನೋಟದಲ್ಲಿ ಅನುಕಂಪವಿದೆಯಾದರೂ ಅನುರಕ್ತಿಯಿಲ್ಲ. ಅವರ ಸರಳವಾದ ನಾಸಿಕ, ಗಂಭೀರವಾದ ತುಟಿಗಳು ಅವರ ಸ್ವಭಾವದ ಪ್ರತೀಕಗಳೇ ಆಗಿವೆ. ಅವರ ತುಂಬುಗೆನ್ನೆ-ಗಲ್ಲಗಳು ಅವರ ತುಂಬು ಹೃದಯವನ್ನು ಸೂಚಿಸುತ್ತವೆ. ಅವರ ನಿಷ್ಠೆ-ನಿಷ್ಕಾಪಟ್ಯಗಳು ಅವರ ಹಣೆಯಲ್ಲಿ ಎದ್ದು ಕಾಣುತ್ತವೆ. ಸಂನ್ಯಾಸಿನಿಯ ಸಂಯಮ ಮತ್ತು ಮಾತೃಹೃದಯದ ಪ್ರೇಮಗಳ ಅದ್ಭುತ ಮಿಲನವನ್ನು ಅವರ ಮುಖದಲ್ಲಿ ಕಾಣಬಹುದು. ಅವರ ಅತಿ ಸರಳತೆ, ಅತಿ ನಮ್ರತೆಗಳು ಅವರ ನಿಜವಾದ ವ್ಯಕ್ತಿತ್ವವನ್ನು ಮರೆಮಾಡಿದ್ದುವು. ಅವರ ಬಾಳಿನ ಆಳವನ್ನು ಸ್ವಲ್ಪಮಟ್ಟಿಗಾದರೂ ಗ್ರಹಿಸಿದ್ದ ಜನಕ್ಕೆ ಮಾತ್ರ ಆ ವ್ಯಕ್ತಿತ್ವದ ಅಲ್ಪಸ್ವಲ್ಪ ಪರಿಚಯವಾಗುತ್ತಿತ್ತು. ಅವರ ಜೀವನವೇ ಅವರ ವ್ಯಕ್ತಿತ್ವದ ಸ್ಪಷ್ಟವಾದ ಪ್ರತಿಬಿಂಬವಾಗಿದೆ. ಶ್ರೀಶಾರದಾದೇವಿಯವರ ತುಂಬುಜೀವನದ ತುಂಬ ವ್ಯಾಪಿಸಿದ್ದ ಅವರ ವ್ಯಕ್ತಿತ್ವದ ಪ್ರಖರವಾದ ಅಂಶವೆಂದರೆ ಅವರ ಮಾತೃಭಾವ. ಅದು ಅವರ ಉಸಿರು ; ಅದು ಅವರ ಶಕ್ತಿ. ಅವರ ಮಾತೃತ್ವಕ್ಕೆ ಮಣಿಯದ ಜೀವವೇ ಇರಲಿಲ್ಲ. ಅವರು ಶ್ರೀರಾಮಕೃಷ್ಣರ ಸೇವೆ ಮಾಡಿದ್ದೂ ಹೆಚ್ಚಾಗಿ ಮಾತೆಯಂತೆಯೇ ; ಪತ್ನಿಯಂತಲ್ಲ. ಅದೆಷ್ಟು ಚತುರತೆಯಿಂದ ಅವರು ಶ್ರೀರಾಮಕೃಷ್ಣರ ಆರೈಕೆಯನ್ನು ಮಾಡುತ್ತಿದ್ದರು! ಅದೆಷ್ಟು ಕಾತರತೆಯಿಂದ ಅವರ ದೇಹಪೋಷಣೆ ಮಾಡುತ್ತಿದ್ದರು! ಶ್ರೀರಾಮಕೃಷ್ಣರು ಶ್ರೀಶಾರದಾದೇವಿಯವರನ್ನು ಮಾತೆಯೆಂದು ಅರ್ಚಿಸಿದ್ದರಲ್ಲಿ ಗಹನವಾದ ಅರ್ಥವಿದೆ. ದುಃಖಿಗಳು ಯಾರೇ ಬರಲಿ, ಅವರಿಗೆ ಶ್ರೀ ಶಾರದಾದೇವಿಯವರ ಆಶ್ರಯ ಸದಾಸಿದ್ಧ. ತಮ್ಮನ್ನು ಆಶ್ರಯಿಸಿ ಬಂದವರ ದುಃಖ ದೂರವಾದರೆ ಅವರಿಗಿಂತ ಶ್ರೀಮಾತೆಯವರೇ ಹೆಚ್ಚು ಸಂತೋಷಪಡುತ್ತಿದ್ದರು. ಶ್ರೀಮಾತೆಯವರ ಮಾತೃಪ್ರೇಮಕ್ಕೆ ಮೇಲುಕೀಳೆನ್ನುವುದರ ಪರಿವೆಯೇ ಇರಲಿಲ್ಲ.

ಭಗವಂತನಿಗೆ ಬೇಕಾದುದು ಭಕ್ತಿ, ಪಾಂಡಿತ್ಯವಲ್ಲ ದೇವರು ಮೆಚ್ಚುವುದು ಸೇವೆಯನ್ನು, ಶೌರ್ಯವನ್ನಲ್ಲ. ಅನುಕಂಪವೇ ಅನುಭಾವದ ನೆಲೆಗಟ್ಟು; ಅಸಹನೆಯೇ ಅಪರಿಪೂರ್ಣತೆಯ ಕುರುಹು ಇಂತಹ ಇನ್ನೂ ಅನೇಕ ಅಮೃತಸಂದೇಶಗಳನ್ನು ನೀಡಿ ಶ್ರೀಮಾತೆ ಶಾರದಾದೇವಿಯವರು ತಮ್ಮ ಅಪಾರ ಕಾರುಣ್ಯ, ಸೌಶೀಲ್ಯ, ವಾತ್ಸಲ್ಯ ಮತ್ತು ಔದಾರ್ಯಗಳ ಮೂಲಕ, ಬಹುವಿಧವಾದ ಕೋಟಲೆಗಳಿಂದ ಕಷ್ಟಪಡುತ್ತಿರುವವರನ್ನು ಮೇಲೆತ್ತಿ ಶಾಂತಿ ಸಮಾಧಾನಗಳನ್ನು ಕೊಟ್ಟು ಮೋಕ್ಷಸಾಧನೆಯ ಮಾರ್ಗವನ್ನು ಲೋಕಕ್ಕೆ ತೋರಿಸಿದ್ದಾರೆ.

ಶ್ರೀಮಾತೆಯ ಜೀವನವನ್ನು ಓದುವಾಗ ನಮಗೆ ಗೋಚರಿಸುವುದೇ ಅವರ ಪಾವಿತ್ರ್ಯ. ಸಕಲ ಕಾಮನೆಗಳನ್ನೂ ತೊರೆದು, ಅವತಾರಪುರುಷನ ಪರಿಶುದ್ಧತೆಗೆ ಸರಿತೂಗುವ ಪವಿತ್ರತಾಸ್ವರೂಪಿಣಿಯಾಗಿ ಬೆಳಗಿದವರು. ನಂತರ ಕಾಣುವ ಅಂಶವೇ ಅವರ ಏಕನಿಷ್ಠೆಯ ಪತಿಸೇವಾ ವೈಭವ! ದಕ್ಷತೆ, ನಿಸ್ವಾರ್ಥತೆ ತನ್ಮಯತೆಗಳಿಂದ ಕೂಡಿದ ಪರಿಪೂರ್ಣ ಸೇವೆಯದು! ಇನ್ನಷ್ಟು ಓದು ಮುಂದುವರಿದರೆ ತಿಳಿಯುವುದು ಅವರ ಅಪೂರ್ವ ಮಾತೃಪ್ರೇಮ, ಮಾತೃವಾತ್ಸಲ್ಯ, ಪ್ರತಿಫಲದ ನಿರೀಕ್ಷೆಯೇ ಇಲ್ಲದೇ ವಿಶ್ವವನ್ನೇ ತಬ್ಬುವ ಮಾತೃವಾತ್ಸಲ್ಯ!
ಅಮ್ಮನ ಬಗ್ಗೆ ಅದೇಷ್ಟು ಬರೆದರೂ ತೃಪ್ತಿ ನೀಡದೆ ಇನ್ನೂ ಆಕೆಯ ಲೀಲೆಯನ್ನು, ವೈಭವವನ್ನೂ, ದಿವ್ಯತೆಯನ್ನು, ಆಕೆಯ ಸಮಗ್ರ ವ್ಯಕ್ತಿತ್ವದಲ್ಲಿ ಓತಪ್ರೋತವಾಗಿರುವ ದಿವ್ಯಸ್ವರೂಪವನ್ನು, ಮಹೋನ್ನತ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು, ಅಪ್ರತಿಹತ ಆಧ್ಯಾತ್ಮಿಕ ಶಕ್ತಿಯನ್ನು, ಪ್ರೇಮಪೂರ್ಣ ಮಹಾಗುರುಶಕ್ತಿಯನ್ನು ವರ್ಣಿಸಬೇಕೇನ್ನಿಸುತ್ತದೆ. ಮುಂದಿನ ದಿನಗಳಲ್ಲಿ ಮತ್ತೇ ಆಕೆಯ ಬಗ್ಗೆ ಬರೆಯುವ ಮನ ನೀಡಲಿ ಎಂದು ಆಕೆಯಲ್ಲೇ ಶ್ರದ್ಧೆಯಿಂದ ಪಾದಸ್ಪರ್ಶಿಸಿ ಪ್ರಾರ್ಥಿಸುವೆ.

ಇಂದು ಶ್ರೀಮಾತೆಯ ಜನ್ಮದಿನ. ಮನದಲ್ಲೇ ಆಕೆಯನ್ನು ಸ್ಮರಣೆ ಮಾಡಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿ.

ಸರ್ವಮಂಗಲಮಾಂಗಲ್ಯೇ, ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರಂಬಕೇ ಗೌರಿ ನಾರಾಯಣಿ ನಮೋಸ್ತು ತೇ
ಸೃಷ್ಟಿಸ್ಥಿತಿವಿನಾಶಾನಾಂ ಶಕ್ತಿಭೂತೇ ಸನಾತನಿ |
ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋಸ್ತು ತೇ
ಶರಣಾಗತದೀನಾರ್ತಪರಿತ್ರಾಣಪರಾಯಣೇ |
ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋಸ್ತು ತೇ

Similar Posts

Leave a Reply

Your email address will not be published. Required fields are marked *